ಧನಕಟಕ
ಆಂಧ್ರ ಪ್ರದೇಶದಲ್ಲಿ ಗುಂಟೂರು ಪಟ್ಟಣಕ್ಕೆ ಉತ್ತರಕ್ಕೆ 35 ಕಿಮೀ. ದೂರದಲ್ಲಿ ಅಮರಾವತೀ  - ಧರಣಿಕೋಟ  ಅವಳಿ ಗ್ರಾಮಗಳಿರುವ ಪ್ರದೇಶದಲ್ಲಿದ್ದ ಪ್ರಾಚೀನ ಹೊಳಲು.  ಉ. ಅ. 160 30 ಮತ್ತು ಪೂ. ರೇ. 800 20 ಮೇಲೆ ಈ ನಿವೇಶನವಿದೆ.  ಪ್ರಾರಂಭಿಕ ಬೌದ್ಧ ಸ್ತೂಪಗಳಿಗೂ ಸುಂದರ ಶಿಲ್ಪಕ್ಕೂ ಇದು ಪ್ರಸಿದ್ಧವಾಗಿರುವುವಾದರೂ, ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪುರಾತನ ಶಿಲಾಯುಗದ ಕೊಡಲಿಗಳು, ನವಶಿಲಾಯುಗದ ನುಣುಪು ಗಲ್ಲು, ಕೊಡಲಿಗಳು, ಉಳಿಗಳು ಮತ್ತು ಕಲ್ಲಿನ ಕಿರು ಅಲಗುಗಳು, ಮಡಕೆಗಳು ಮುಂತಾದವು ಸಿಕ್ಕಿವೆ.

	ಧನಕಟಕ ಬೌದ್ಧ ಹಾಗೂ ಶೈವಮತಗಳ ಮಹಾಕೇಂದ್ರವಾಗಿ ಬೆಳೆದು 1182ರ ತರುವಾಯ ಅಮರಾವತಿ ಎಂಬ ಹೆಸರನ್ನೂ ತಾಳಿತು.  ರೆಡ್ಡಿ ಅರಸರ ಕಾಲದಿಂದ (14 ನೆಯ ಶತಮಾನ) ಮುಂದೆ, ಕೋಟೆಕೊತ್ತಲೆಗಳಿಂದ ಸುಭದ್ರವಾಗಿದ್ದ ಈ ಸ್ಥಳಕ್ಕೆ ಧರಣಿಕೋಟ ಎಂಬ ಹೆಸರು ಬಂತು.

	ಧನಕಟಕ ನಿವೇಶನದಲ್ಲಿರುವ ಮಹಾ ಚೈತ್ಯ ಬಹಳ ಪ್ರಸಿದ್ಧವಾದ್ದು.  ಈ ಚೈತ್ಯ ವಿಪುಲ ಶಿಲ್ಪದಿಂದ ಕೂಡಿ ಅನೇಕ ಶತಮಾನಗಳ ಕಾಲ  ಅಂಥ ನಾಡಿನಲ್ಲಿ ಬೌದ್ಧಮತದ ಮಹಾಕೇಂದ್ರವಾಗಿತ್ತು.  ಅದರಲ್ಲಿ ಬುದ್ಧನ ಅವಶೇಷಗಳನ್ನು ಇಡಲಾಯಿತೆಂದೂ ಮಂಜುಶ್ರೀ ಮೂಲಕಲ್ಪದಿಂದ ತಿಳಿದುಬರುತ್ತದೆ.  ಅವಶಿಷ್ಟವಾಗಿ ಉಳಿದಿರುವ ಅಶೋಕನ ಸ್ತಂಭಶಾಸನವೇ ಅಲ್ಲದೆ ಕ್ರಿ. ಪೂ. ಸು. 3ನೆಯ ಶತಮಾನದಿಂದೀಚಿನ ಕಾಲದ ಹಲವಾರು ದಾನಶಾಸನಗಳು ಚೈತ್ಯಗಳಲ್ಲಿ ಮಹಾಚೈತ್ಯ ಎನಿಸಿಕೊಂಡ ಈ ಸ್ತೂಪದ ಪ್ರಾಮುಖ್ಯವನ್ನು ಸಾರುತ್ತವೆ.  ಸಮಾಜದ ಎಲ್ಲ ಅಂತಸ್ತುಗಳ ಹಾಗೂ ರಾಜಗೃಹ ಮತ್ತು ಪಾಟಲೀಪುತ್ರಗಳಂಥ  ದೂರದ ಸ್ಥಳಗಳ ಯಾತ್ರಿಕರು ಈ ಮಹಾಚೈತ್ಯಕ್ಕೆ ಉದಾರ ದಾನದತ್ತಿಗಳನ್ನು ನೀಡಿದ್ದರು.  ವೈಶಾಲಿ, ಶ್ರಾವಸ್ತಿ, ಕುಶೀನಗರ ಮೊದಲಾದ ಬೌದ್ಧ ಕೇಂದ್ರಗಳೊಂದಿಗೆ ಧನಕಟಕ ನಿಕಟ ಸಂಪರ್ಕ ಹೊಂದಿತ್ತು.

	2 ನೆಯ ವಾಶಿಷ್ಟೀ ಪುತ್ರ ಪುಲುಮಾವಿ ಸಮ್ರಾಟ ಈ ನಗರವನ್ನು ಸಾತವಾಹನ ಸಾಮ್ರಾಜ್ಯದ ಪೂರ್ವ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ.  ಅವನ ಧನಕಟಕದ ಸ್ವಾಮಿ ಎನಿಸಿಕೊಂಡಿದ್ದ.  ಪಲ್ಲವರ ಆಳ್ವಿಕೆಯಲ್ಲಿ ಇದು ಆಂಧ್ರನಾಡಿನ ಪ್ರಾಂತೀಯ ಆಡಳಿತ ಕೇಂದ್ರವಾಗಿತ್ತು.  ಧನಕಟಕ ಆಂಧ್ರದ ರಾಜಧಾನಿಯಾಗಿತ್ತೆಂದೂ ಅದರ ಸುತ್ತಳತೆ ನಲವತ್ತು ಲೀ ಎಂದೂ ಚೀನಿ ಯಾತ್ರಿಕ ಹ್ಯೂಯನ್‍ತ್ಸಾಂಗ್ ವರ್ಣಿಸಿದ್ದಾನೆ. ಇಲ್ಲಿ ಅವನು ಅಭಿಧಮ್ಮವನ್ನು ಅಧ್ಯಯನಮಾಡಿದ. ಟಿಬೆಟ್ಟಿನ ಇತಿಹಾಸಕಾರ ತಾರಾನಾಥನೂ ಇದನ್ನು ಹೆಸರಿಸಿದ್ದಾನೆ.

	ಧರಣಿಕಟಕದುರ್ಗ ಪ್ರದೇಶದಲ್ಲಿ ನೌಕಾಯಾನ ಯೋಗ್ಯವಾದ ನಾಲೆಯಿಂದ ಕೂಡಿದ ಪ್ರಾಚೀನ ಬಂದರು ಇತ್ತು.  ಪ್ರಾರಂಭದಲ್ಲಿ ಮರದಿಂದಲೂ ತರುವಾಯ ಇಟ್ಟಿಗೆಯಿಂದಲೂ ಕಟ್ಟಿದ ಹಡಗುಕಟ್ಟೆಯ ವೇದಿಕೆಗಳೇ ಮೊದಲಾದವು ಉತ್ಖನನದಿಂದ ಬೆಳಕಿಗೆ ಬಂದಿದೆ.  ಕ್ರಿಸ್ತಪೂರ್ವ ಕಾಲದಲ್ಲೂ ಇದು ಪಾಶ್ಚತ್ಯ ದೇಶಗಳೊಂದಿಗೆ ವ್ಯಾಪಾರ ನಡೆಸುತ್ತಿತ್ತೆಂಬುದಕ್ಕೆ ಹಲವು ಪುರಾವೆಗಳು ದೊರೆತಿವೆ.   ಕ್ರಿ. ಪೂ. ಸು. 4000 ರಿಂದ ಧನಕಟಕ ಪ್ರಸಿದ್ಧಿಗೆ ಬಂದಿರಬೇಕು.

	ಈ ಪ್ರದೇಶ ಪ್ರಾರಂಭಿಕ ಬೌದ್ಧಮತದ ಕೇಂದ್ರವಾಗಿದ್ದುದಲ್ಲದೆ ವ್ಯಾಪಾರಕ್ಕೂ ಪ್ರಸಿದ್ಧವಾಗಿತ್ತೆಂಬುದು ಇಲ್ಲಿ ದೊರಕಿರುವ ಪಳೆಯುಳಿಕೆಗಳಿಂದ ಗೊತ್ತಾಗುತ್ತದೆ.  ಕ್ರಿಸ್ತಶಕದ ಆರಂಭದ ಅನಂತರದ ಶತಮಾನಗಳಲ್ಲಿ ಧರಣಿಕೋಟ, ಸಾತವಾಹನ, ಇಕ್ಷ್ವಾಕು, ಪಲ್ಲವ ವಿಷ್ಣುಕುಂಡಿನ್, ಪೂರ್ವ ಚಾಳುಕ್ಯ ಮತ್ತು ಅಂತಿಮವಾಗಿ ಕೋಟ ಸಂತತಿಗಳ ಆಳ್ವಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು. ಪಂಚಾರಾಮಗಳಲ್ಲಿ ಒಂದಾದ ಅಮರಾವತಿಯ ದೇವಾಲಯ ಈಗಲೂ ಆಂಧ್ರಪ್ರದೇಶದ ಒಂದು ಯಾತ್ರಾಸ್ಥಳವಾಗಿದೆ.
(ಐ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ